ದೇಶದ ಭದ್ರತೆಗೆ ಕಾಂಗ್ರೆಸ್ ನಿಂದಲೇ ಅಪಾಯ – ಅಶೋಕ್

ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ನಗರವನ್ನು ತಲ್ಲಣಗೊಳಿಸಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪದೇ ಪದೇ ಸ್ಫೋಟ ಪ್ರಕರಣಗಳು ನಡೆಯುತ್ತವೆ.‌ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟದ ನಂತರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದು ಉದ್ಯಮ ದ್ವೇಷದಿಂದ ಆದ ಘಟನೆ ಅಂತ ಹೇಳುವ ಮೂಲಕ ಪ್ರಕರಣವನ್ನು ತಿರುಚಲು ಪ್ರಯತ್ನಪಟ್ಟಿದ್ದರು. ಅಲ್ಪಸಂಖ್ಯಾತರ ಮೇಲೆ ಏನಾದರೂ ಆರೋಪ ಬಂದರೆ ಕಾಂಗ್ರೆಸ್ನವರು ಸಹಿಸಲ್ಲ. ಈ ದೇಶದ ಭದ್ರತೆಗೆ ಕಾಂಗ್ರೆಸ್ನಿಂದಲೇ ಅಪಾಯವಿದೆ ಎಂದು ಅಶೋಕ ವಾಗ್ದಾಳಿ ನಡೆಸಿದ್ದಾರೆ.

ಇದು ಉದ್ಯಮ ದ್ವೇಷದಿಂದ ಆದ ಘಟನೆ ಅಂತ ದಿಕ್ಕು ತಪ್ಪಿಸಲು‌ ನೋಡಿದರು. ಡಿಕೆ ಶಿವಕುಮಾರ್ ಬೆಂಗಳೂರಿನ ಹೆಡ್, ಹೆಡ್ ಹೇಳಿದ ಮೇಲೆ ಪೊಲೀಸರು ಅದೇ ದಿಕ್ಕಿನಲ್ಲಿ ತನಿಖೆ ಮಾಡೋದು‌ ಸಹಜ. ಮಂಗಳೂರು ಬಾಂಬ್ ಬ್ಲಾಸ್ಟ್ ಆರೋಪಿಯನ್ನು ಬ್ರದರ್ಸ್ ಅಂದರು. ಕೆಲ ಮಂತ್ರಿಗಳು ಕೂಡ ಪ್ರಕರಣದ ದಿಕ್ಕು ತಪ್ಪಿಸುವ ಹೇಳಿಕೆ ಕೊಟ್ಟರು ಎಂದು ಹೇಳಿದರು.

ರಾಜ್ಯ ಸರ್ಕಾರ ಒಂದು ದಿಕ್ಕು ಕೊಟ್ಟ ಹಿನ್ನೆಲೆಯಲ್ಲಿ ಪೊಲೀಸರ ತನಿಖೆಯಲ್ಲಿ ಪ್ರಗತಿ ಆಗಲಿಲ್ಲ. ಯಾವಾಗ ಎನ್ಐಎ ತನಿಖೆಯನ್ನು ಕೈಗೆತ್ತಿಕೊಂಡಿತೋ, ಪ್ರಕರಣದ ತನಿಖೆ ಸರಿಯಾದ ದಾರಿಯಲ್ಲಿ ಸಾಗಿತು. ಶಂಕಿತ ಉಗ್ರರನ್ನು ಬಂಧಿಸಲಾಯಿತು. ಎನ್ಐಎ ಅಧಿಕಾರಿಗಳು ಶಂಕಿತ ಉಗ್ರರನ್ನು ಬಂಧಿಸಿ ಮಹತ್ತರ ಸಾಧನೆ ಮಾಡಿದ್ದಾರೆ. ಶಂಕಿತ ಉಗ್ರರ ಬಂಧನದಿಂದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ರಾಜ್ಯದ ಜನತೆ ಪರವಾಗಿ ನಾನು ಎನ್ಐಎ ತಂಡಕ್ಕೆ ಅಭಿನಂದನೆ ಸಲ್ಲಿಸ್ತೇನೆ ಎಂದರು.

ಪಶ್ಚಿಮ ಬಂಗಾಳ ರಾಜ್ಯ ಸುರಕ್ಷಿತ ಅಂತ ಶಂಕಿತ ಉಗ್ರರು ಅಲ್ಲೇ ಇದ್ದರು. ಕಾಂಗ್ರೆಸ್ನವರ ತಂಗಿಯ ರಾಜ್ಯದಲ್ಲಿ ಶಂಕಿತರು ಬಂಧನವಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಮೊಬೈಲ್ ಮಾರಿದ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ವಿರುದ್ಧ ಕಾಂಗ್ರೆಸ್ನವರು ಸುಳ್ಳು ಆರೋಪ ಮಾಡಿದರು. ನಮ್ಮ ಕಡೆ ಬೆರಳು ತೋರಿಸಿದರು. ಆದರೆ ಅದೇ ಸಾಯಿ ಪ್ರಸಾದ್ ಸಾಕ್ಷಿಯೇ ಶಂಕಿತರ ಬಂಧನಕ್ಕೆ ಕಾರಣವಾಯಿತು. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಘೋಷಣೆ ಕೂಗಲಾಯಿತು. ಅವರನ್ನು ಬಂಧಿಸಲು ಒಂದು ವಾರ ಸಮಯ ತೆಗೆದುಕೊಂಡರು. ಅದಕ್ಕಾಗಿ ನಾವು ವಿಧಾನಸೌಧದಲ್ಲಿ ಎರಡು ದಿನ ಹೋರಾಟ ನಡೆಸಿದೆವು. ರಾಮೇಶ್ವರಂ ಕೆಫೆ ಸ್ಫೋಟ, ಪಾಕ್ ಪರ ಘೋಷಣೆ ಪ್ರಕರಣ ಮುಚ್ಚಿ ಹಾಕಲು ಕಾಂಗ್ರೆಸ್ ಪ್ರಯತ್ನ ಪಟ್ಟಿದೆ. ಈ ದೇಶದ ಭದ್ರತೆಗೆ ಕಾಂಗ್ರೆಸ್ ಪಕ್ಷದಿಂದಲೇ ಅಪಾಯವಿದೆ ಎಂದು ಅಶೋಕ್ ಕಿಡಿಕಾರಿದರು.

LEAVE A REPLY

Please enter your comment!
Please enter your name here