ಸುಮಲತಾ ಅವರನ್ನು ಭೇಟಿಯಾದ ಹೆಚ್ ಡಿ ಕೆ 

ಬೆಂಗಳೂರು : ಕಳೆದ ಬಾರಿ ಸದ್ದು ಮಾಡಿದ್ದ ಮಂಡ್ಯ ಅಖಾಡ, ಈ ಬಾರಿಯೂ ಕಾವೇರಿದೆ. ನಾಮಪತ್ರ ಸಲ್ಲಿಕೆಗೆ 3 ದಿನ ಬಾಕಿ ಇದೆ. ಏಪ್ರಿಲ್ 3ಕ್ಕೆ ನಿರ್ಧಾರ ತಿಳಿಸುವುದಾಗಿ ಸುಮಲತಾ ಅಂಬರೀಶ್ ಹೇಳಿರುವುದು ಮಂಡ್ಯ ಯುದ್ಧಕ್ಕೆ ಹೊಸ ಆಯಾಮ ಕೊಟ್ಟಿದೆ. ಹೀಗಾಗಿ ಸುಮಲತಾರನ್ನ ಭೇಟಿಯಾಗಿದ್ದ ಎಚ್.ಡಿ ಕುಮಾರಸ್ವಾಮಿ, ಮನವೊಲಿಸೋ ಪ್ರಯತ್ನ ಮಾಡಿದ್ದಾರೆ. ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಸಹಕಾರ ಕೊಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಇನ್ನು ಭೇಟಿ ವೇಳೆ ಸುಮಲತಾ ಅಂಬರೀಶ್ ಏನು ಹೇಳಿದ್ದಾರೆ ಎನ್ನುವುದಕ್ಕೆ ಎಚ್ಡಿ ಪ್ರತಿಕ್ರಿಯಿಸಿದ್ದು, ಆರೋಗ್ಯಕರ ಚರ್ಚೆ ಆಗಿದೆ ಎಂದು ಹೇಳಿದ್ದಾರೆ. ಫಲಪ್ರದವಾಗಿದೆ ಎಂದು ಆ ಪದದಲ್ಲಿದೆ. ಅದನ್ನು ಅವರು ಸೂಕ್ಷ್ಮವಾಗಿ ಹೇಳಿದ್ದಾರೆ. ಅದಕ್ಕೆ ಕಾಂಗ್ರೆಸ್ನವರು ಭಯ ಬಿದ್ದು ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಈ ಮೂಲಕ ಪರೋಕ್ಷವಾಗಿ ಸುಮಲತಾ ಜೊತೆಗಿನ ಭೇಟಿ ಫಲಪ್ರದವಾಗಿದೆ ಎಂದು ಹೇಳಿದರು.

ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಎಚ್ಡಿ ಕುಮಾರಸ್ವಾಮಿ ಅವರು ಈ ಬಾರಿ ಮಂಡ್ಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದ್ರೆ, ಅವರಿಗೆ ರಾಜಕೀಯ ಬದ್ಧ ವೈರಿಯಾಗಿರುವ ಸುಮಲತಾ ಅಂಬರೀಶ್ ಅವರ ನಡೆ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ವೈಷಮ್ಯ ಮರೆತು ಖುದ್ದು ಕುಮಾರಸ್ವಾಮಿಯೇ ಸುಮಲತಾ ಅಂಬರೀಶ್ ಅವರ ಮನೆ ಬಾಗಿಲಿಗೆ ಹೋಗಿದ್ದಾರೆ. ಹೌದು..ಕುಮಾರಸ್ವಾಮಿಯವರು ನಿನ್ನೆ(ಮಾರ್ಚ್ 31) ಬೆಂಗಳೂರಿನ ನಿವಾಸದಲ್ಲಿ ಸುಮಲತಾ ಅವರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದ್ರೆ, ಸುಮಲತಾ ಅಂಬರೀಶ್ ಇನ್ನೂ ಯಾವುದೇ ಅಂತಿಮ ತೀರ್ಮಾನ ಪ್ರಕಟಿಸಿಲ್ಲ. ಸುಮಲತಾ ಇಟ್ಟಿರುವ ಹೆಜ್ಜೆಯನ್ನ ಹಿಂದಕ್ಕೆ ತೆಗೆಯುತ್ತಿಲ್ಲ. ಸಹಕಾರ ಕೋರಿದ ಕುಮಾರಸ್ವಾಮಿಗೆ, ಬೆಂಬಲಿಗರ ಜೊತೆ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಹೇಳಿ ಕಳುಹಿಸಿದ್ದಾರೆ. ಏಪ್ರಿಲ್ 3ಕ್ಕೆ ನಿರ್ಧಾರ ಘೋಷಿಸಲು ಸಜ್ಜಾಗಿರುವ ಸುಮಲತಾಗೆ ಶಾಕ್ ಆಗಿದೆ. ಅತ್ತ ಮಂಡ್ಯದಲ್ಲಿ ಸುಮಲತಾ ಆಪ್ತ ಸಚ್ಚಿದಾನಂದ ಮೈತ್ರಿ ಬೆಂಬಲಿಸಿ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಸುಮಲತಾ ಮುಂದಿನ ನಡೆ ಏನು ಎನ್ನುವುದೇ ಸಸ್ಪೆನ್ಸ್ ಆಗಿಯೇ ಉಳಿದಿದೆ. ಆದ್ರೆ, ಸದ್ಯ ಸುಮಲತಾ, ಹೆಚ್‌ಡಿಕೆಗೆ ಬೆಂಬಲ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.

2019ರಲ್ಲಿ ಇದ್ದ ಸ್ಥಿತಿ ಈಗ ಮಂಡ್ಯದಲ್ಲಿ ಇಲ್ಲ. ಮಂಡ್ಯದ ಜನ ಸುಮಲತಾ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಬಾರಿಯೂ ಸ್ವತಂತ್ರವಾಗಿ ಕಣಕ್ಕಿಳಿದ್ರೆ ಹಿನ್ನಡೆಯಾಗಬಹುದೆಂಬ ಭಯ ಸುಮಲತಾ ಅವರನ್ನು ಕಾಡತೊಡಗಿದೆ. ಕಾಂಗ್ರೆಸ್ ಬಾಗಿಲು ಕೂಡಾ ಬಂದ್ ಆಗಿದೆ. ಹೀಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವುದುಸುಮಲತಾ ಇಚ್ಛೆಯಾಗಿರುವುದರಿಂದ ಮೈತ್ರಿಗೆ ಬೆಂಬಲಿಸಬೇಕಾದ ಅನಿವಾರ್ಯತೆ ಇದೆ. ಮೈತ್ರಿ ವಿರುದ್ಧ ನಡೆದುಕೊಂಡ್ರೆ ಭವಿಷ್ಯದಲ್ಲಿ ಸಂಕಷ್ಟ ಸಾಧ್ಯತೆಯೇ ಹೆಚ್ಚಿದೆ ಎನ್ನಲಾಗಿದೆ. ಹೀಗಾಗಿ ಇದೀಗ ಕುಮಾರಸ್ವಾಮಿಅ ಅವರ ಮಾತುಗಳನ್ನು ಗಮನಿಸಿದರೆ ಸುಮಲತಾ ಅಂಬರೀಶ್ ಅವರು ಬೆಂಬಲಿಸುವ ಸಾಧ್ಯತೆಗಳಿವೆ. ಆದ್ರೆ, ರಾಜಕೀಯ ಬದ್ಧ ವೈರಿಯಾಗಿರುವ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಹೋಗದೇ ಬಾಹ್ಯವಾಗಿ ಬೆಂಬಲಿಸಲಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here