ಪಟಾಕಿ ಕಾರ್ಖಾನೆ ಸ್ಫೋಟ – 11 ಮಂದಿ ದುರ್ಮರಣ, 60 ಮಂದಿಗೆ ಗಾಯ

ಭೋಪಾಲ್ : ಮಧ್ಯಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ದುರಂತ ನಿಜಕ್ಕೂ ಭಯಾನಕವಾಗಿದೆ. ಪಟಾಕಿ ಕಾರ್ಖಾನೆಯ ಸ್ಫೋಟಕ್ಕೆ ಹಲವಾರು ಮನೆಗಳು ಹೊತ್ತಿ ಉರಿದಿದ್ದು, ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಲ್ಲಿ ಬೆಂಕಿಯಲ್ಲಿ ಸುಟ್ಟು ಗಾಯಗಳಾಗಿರುವ 50ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ.

ಮಧ್ಯಪ್ರದೇಶ ಹರ್ದಾ ಜಿಲ್ಲೆಯ ಭೈರಾಗರ್ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಪಟಾಕಿ ಕಾರ್ಖಾನೆಯಲ್ಲಿ ಅಪಾರ ಪ್ರಮಾಣದ ಪಟಾಕಿ ಸ್ಫೋಟಗೊಂಡಿದ್ದು, ಅಕ್ಕ-ಪಕ್ಕದ ಮನೆಯೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಘಟನಾ ಸ್ಥಳದಲ್ಲಿದ್ದ ಜನರೆಲ್ಲಾ ತಮ್ಮ ಜೀವ ಉಳಿಸಿಕೊಳ್ಳಲು ಸ್ಥಳದಿಂದ ಓಡಿ ಹೋಗಿದ್ದಾರೆ. ಈ ವೇಳೆ ಕಾಲ್ತುಳಿತ ಸಂಭವಿಸಿದ್ದು, ಗಾಯಾಳುಗಳನ್ನ ರಕ್ಷಿಸಲು ಹರಸಾಹಸ ಪಡಲಾಗಿದೆ.

ಪಟಾಕಿ ಫ್ಯಾಕ್ಟರಿಯಲ್ಲಿ ಹಲವು ಬಾರಿ ಸ್ಫೋಟ ಸಂಭವಿಸಿದ್ದು 60ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ. ಇದರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಈ ದುರ್ಘಟನೆ ಸಂಭವಿಸಿದ ಕೂಡನೇ ಸಿಎಂ ಮೋಹನ್ ಯಾದವ್ ಅವರು ಅಧಿಕಾರಿಗಳನ್ನು ಸಂಪರ್ಕ ಮಾಡಿದ್ದು ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಮಧ್ಯಪ್ರದೇಶದ ಸಚಿವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಸ್ಫೋಟಗೊಂಡಿರುವ ಪಟಾಕಿ ಕಾರ್ಖಾನೆ ಅನಧಿಕೃತವಾದದ್ದು, ಈ ಫ್ಯಾಕ್ಟರಿಗೆ ಯಾವುದೇ ಲೈಸೆನ್ಸ್ ತೆಗೆದುಕೊಂಡಿರಲಿಲ್ಲ. ಅವೈಜ್ಞಾನಿಕವಾಗಿ ಸಂಗ್ರಹಿಸಿದ್ದ ಪಟಾಕಿ ಸ್ಫೋಟಗೊಂಡಿದ್ದು, ಸುಮಾರು 15 ಕಿಲೋ ಮೀಟರ್ವರೆಗೂ ಇದರ ಕಂಪನ ಪ್ರಭಾವ ಬೀರಿದೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here